ಗ್ಲಾಸೆಮ್ಯಾಟಿಕ್ಸ್-
ಭಾಷಾಶಾಸ್ತ್ರದಲ್ಲಿ ಭಾಷಾವಿಶ್ಲೇಷಣ ವಿಧಾನವನ್ನು ಆಧರಿಸಿ ಮಾಡಿರುವ ಹಲವು ಶಾಖೆಗಳಲ್ಲಿ ಒಂದು. ಈ ಶಾಖೆಗಳಲ್ಲಿ ಮುಖ್ಯವಾದವೆಂದರೆ ಅಮೆರಿಕದಲ್ಲಿ ಬ್ಲೂಮ್‍ಫೀಲ್ಡನಿಂದ ಪೋಷಿತವಾದದ್ದೊಂದು, ಚೆಕೊಸ್ಲೊವಾಕಿಯದ ಪ್ರಾಗ್ ನಗರದಲ್ಲಿ ಟ್ರುಬೆಟ್ಸ್‍ಕೋಯ್, ಯಾಕಬ್‍ಸನ್ ಮೊದಲಾದವರಿಂದ ಪ್ರಾರಂಭಿಸಲ್ಪಟ್ಟ ಶಾಖೆಯೊಂದು, ಜಿನೀವ ನಗರದಲ್ಲಿ ಫರ್ಡಿನಾಂಡ್ ಸಸ್ಸೂರನಿಂದ ಬೆಳೆಸಲ್ಪಟ್ಟ ಶಾಖೆಯೊಂದು, ಹಾಗೆಯೇ ಡೆನ್ಮಾರ್ಕಿನ ಕೋಪನ್‍ಹೇಗನ್ ಪಟ್ಟಣದಲ್ಲಿ ಪ್ರಚಾರಕ್ಕೆ ಬಂದ ಎಲ್ಮ್‍ಸ್ಲೆವ್ ಮತ್ತು ಉಲ್ಡಾವ್‍ರವರ ಸಿದ್ಧಾಂತವೊಂದು. ಕೊನೆಯ ಪ್ರಭೇದವೇ ಗ್ಲಾಸೆಮ್ಯಾಟಿಕ್ಸ್ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಗ್ಲಾಸ್ಸ ಎಂದರೆ ಗ್ರೀಕಿನಲ್ಲಿ ಭಾಷೆ ಎಂದರ್ಥ. ಈ ಸಿದ್ಧಾಂತದ ಪ್ರಕಾರ ನಿಶ್ಚಯಿಸಲ್ಪಡುವ ಭಾಷೆಯ ಅವಿಭಾಜ್ಯ ರೂಪಗಳನ್ನು ಗ್ಲಾಸ್ಸೀಮ್ ಎನ್ನುತ್ತಾರೆ. ಭಾಷೆಯ ಸರಿಯಾದ ತಿಳಿವಳಿಕೆಗೆ, ಅದರ ವಿವರಣೆಗೆ ಅನುಕೂಲವಾದೊಂದು ಬೀಜಗಣಿತೀಯ ವಿಧಾನವನ್ನು ರಚಿಸುವುದೇ ಈ ಸಿದ್ಧಾಂತದ ಲಕ್ಷ್ಯವೆನ್ನಬಹುದು.

	ಅಮೆರಿಕದಲ್ಲಿ ಬ್ಲೂಮ್‍ಫೀಲ್ಡನ ಪ್ರಭಾವ ಬೆಳೆದಂತೆ ಯೂರೋಪಿನಲ್ಲಿ ಫರ್ಡಿನಾಂಡ್ ಸಸ್ಸೂರಿನ ಪ್ರಭಾವ ಬೆಳೆದಿರುವುದನ್ನು ಗಮನಿಸಬಹುದು. ಬ್ಲೂಮ್‍ಫೀಲ್ಡನ ಲ್ಯಾಂಗ್‍ವೇಜ್ ಎಂಬ ಗ್ರಂಥವನ್ನು ಆತನೇ ಬರೆದ. ಸಸ್ಸೂರನ ಗ್ರಂಥವಾದರೋ ಆತನ ಮರಣಾನಂತರ ಆತನ ವಿದ್ಯಾರ್ಥಿಗಳು  ತಮ್ಮ ಗುರುವಿನ ತರಗತಿಯ ಪಾಠಗಳನ್ನು ಸಂಗ್ರಹಿಸಿ ಮುದ್ರಿಸಿದ್ದಾಗಿದೆ.  ಹಾಗಾಗಿ ಆ ಗ್ರಂಥದಲ್ಲಿ ಪರಸ್ಪರ ವಿರೋಧವೆನಿಸುವ ಅನೇಕ ಉಕ್ತಿಗಳಿವೆ. ಇಲ್ಲಿನ ಮಾತುಗಳನ್ನು ವಿದ್ವಾಂಸರು ತಮ ತಮಗೆ ತೋರಿದಂತೆ ವಿವರಿಸಿದ್ದಾರೆ. ಈ ವಿವರಣೆಗಳಲ್ಲಿ ಎಲ್ಮೆಸ್ಲೆವ್‍ನಿಗೂ ಪ್ರಾಗ್ ಶಾಖೆಗೆ ಸಂಬಂಧಿಸಿದವರಿಗೂ ಭೇದವಿರುವುದನ್ನು ಗಮನಿಸಬಹುದು.

	ಸಸ್ಸೂರ್ ಭಾಷೆಯನ್ನು ಸಂಕೇತಗಳ ಒಂದು ವಿಶಿಷ್ಟ ಪದ್ಧತಿ ಎಂದಿದ್ದಾನೆ. ಭಾಷೆಯನ್ನು ಕುರಿತದ ಈ ವ್ಯಾಖ್ಯೆಯನ್ನು ಎಲ್ಲರೂ ಒಪ್ಪಿಕೊಳ್ಳುವರಾದರೂ ಸಸ್ಸೂರನ ಸಂಕೇತ ಸ್ವರೂಪ ಕಲ್ಪನೆಯನ್ನು ಒಪ್ಪಿಕೊಂಡಿಲ್ಲ. ಭಾಷೆಯಲ್ಲಿನ ಸಂಕೇತಗಳಿಗೆ, ಉದಾ : ಭಾಷೆಯಲ್ಲಿನ ಯಾವುದೇ ಒಂದು ಪದಕ್ಕೆ, ಎರಡು ಮುಖಗಳಿವೆಯೆಂದೂ ಅದರಲ್ಲಿ ಒಂದನ್ನು ಅದರ ವಾಚ್ಯ ರೂಪವೆಂದೂ (ಸಿಗ್ನಿಫೈ) ಸಸ್ಸೂರ್ ಪರಿಗಣಿಸಿದ. ಈ ಬಗ್ಗೆ ಸಸ್ಸೂರನ ತರ್ಕವನ್ನು ಎಲ್ಮ್‍ಸ್ಲೆವ್ ಸ್ವೀಕರಿಸಲಿಲ್ಲವಾದರೂ ಭಾಷೆಯ ಸಂಕೇತಗಳಿಗಿರುವ ಮೇಲಿನ ಎರಡು ರೂಪಗಳನ್ನು ಒಪ್ಪಿಕೊಂಡ. ಎಲ್ಮ್‍ಸ್ಲೆವ್ ಇವನ್ನು ಕ್ರಮವಾಗಿ ಸಂಕೇತದ ಉಚ್ಚಾರಣಾರೂಪ (ಎಕ್ಸ್‍ಪ್ರೆಷನ್) ಮತ್ತು ಅಡಗಿರುವರೂಪ(ಕಂಟೆಂಟ್) ಎಂದು ಕರೆದ. ಈ ಸಿದ್ದಾಂತರೀತ್ಯ ಇವೆರಡನ್ನೂ ಭಾಷೆಯ ಎರಡು ಸ್ತರಗಳೆನ್ನುತ್ತಾರೆ. ಸ್ಥೂಲವಾಗಿ ಹೇಳಬಹುದಾದರೆ, ಸಂಕೇತಗಳ ಉಚ್ಚಾರ ರೂಪ ಧ್ವನಿಶಾಸ್ತ್ರದ ವಸ್ತುವೆಂದೂ ಅವುಗಳ ಅಡಗಿರುವ ಅಥವಾ ಅಂತರಿಕ ರೂಪವನ್ನು ಅರ್ಥ ವಿಜ್ಞಾನ (ಸೆಮ್ಯಾಂಟಿಕ್ಸ್) ಮತ್ತು ವ್ಯಾಕರಣಕ್ಕೆ ಸೇರಿದ ವಸ್ತುವೆಂದೂ ಹೇಳಬಹುದು. ಉದಾಹರಣೆಗೆ ಮನೆಗಳು ಎಂಬ ಪದವನ್ನು ಮನೆ ಮತ್ತು ಗಳು ಎಂದು ವಿಭಾಗಿಸಬಹುದು. ಇಲ್ಲಿ ಮನೆ ಎಂಬಲ್ಲಿ ಮ್, ಅ, ನ್,ಎ, ಎಂಬುದಾಗಿ ನಾಲ್ಕು ಧ್ವನಿಮಾಗಳಿವೆ. ಹಾಗೆಯೇ ಗಳು ಎಂಬಲ್ಲಿ ಗ್, ಅ, ಳ್, ಉ, ಇವೆರಡರಲ್ಲಿ  ಮೊದಲಿನ ಭಾಗಕ್ಕೊಂದು ನಿಶ್ಚಿತ ಅರ್ಥವೂ ಎರಡನೆಯ ಭಾಗಕ್ಕೆ ಬಹುವಚನ ಎಂಬ ಅರ್ಥವೂ ಇದೆಯನ್ನಬಹುದು.  ಇದಲ್ಲದೆ, ಎಲ್ಮ್‍ಸ್ಲೆವ್ ಈ ಎರಡು ರೂಪಗಳನ್ನು ಮತ್ತೆ ರಚನೆ (ಫಾರಮ್) ಹಾಗೂ ತಿರುಳು (ಸಬ್ಸ್‍ಟೆನ್ಸ್) ಎಂದು ಎರಡೆರಡು ಭಾಗಗಳಾಗಿ ವಿಂಗಡಿಸುತ್ತಾನೆ.  ಉಚ್ಚಾರಣಾರೂಪ ಧ್ವನಿಗಳಿಂದ ಕೂಡಿದೆಯೆನ್ನಬಹುದು. ಅವನ್ನು ಭೌತಶಾಸ್ತ್ರ ಅಥವಾ ಶರೀರ ಕ್ರಿಯಾ ಶಾಸ್ತ್ರದ ಪ್ರಕಾರ ವಿವರಿಸಬಹುದು. ಹಾಗೆಯೇ ಆಂತರಿಕ ರೂಪವಾದ ಅರ್ಥವನ್ನು ಮನಶ್ಯಾಸ್ತ್ರ ಇತ್ಯಾದಿಗಳ ಸಹಾಯದಿಂದ ವಿವರಿಸಬಹುದು.

	ಭಾಷೆಯ ಸಂಕೇತಗಳ ಉಚ್ಚಾರಣೆಯನ್ನು ಇಲ್ಲವೆ ಬಾಹ್ಯ ಮತ್ತು ಆಂತರಿಕ ರೂಪಗಳ ನಡುವಣ ಸಂಬಂಧವನ್ನು ವಿವರಿಸುವುದೇ ಭಾಷಾ ವಿಶ್ಲೇಷಣದ ಮುಖ್ಯ ಭಾಗ. ಮನೆಯೆಂಬ ಸಂಕೇತದಲ್ಲಿ ಅದರ ಉಚ್ಚಾರಣಾರೂಪಕ್ಕೂ ಅದರಿಂದ ಸೂಚಿತವಾಗುವ ಆಂತರಿಕ ರೂಪವಾದ ಅರ್ಥಕ್ಕೂ ಒಂದು ವಿಶಿಷ್ಟರೀತಿಯ ಸಂಬಂಧವಿದೆ. ಈ ಸಂಬಂಧ ಎಷ್ಟೇ ಯಾದೃಚ್ಛಿಕವಾದರೂ (ಆರ್ಬಿಟ್ರರಿ) ಯಾವುದೇ ಒಂದು ಭಾಷೆಯಲ್ಲಿ ಅವುಗಳೆರಡರ ನಡುವೆ ಅವಿನಾಭಾವ ಸಂಬಂಧವಿದೆ ಎನ್ನಬಹುದು. ವಿಶ್ಲೇಷಣದ ಪ್ರತಿಸ್ತರಗಳಲ್ಲೂ ಈ ವಿಶಿಷ್ಟ ಸಂಬಂಧವನ್ನು ಅನುಸರಿಸಿ, ನಿಯಮಿತಸಂಖ್ಯೆಯ ಭಿನ್ನ ಭಿನ್ನ ಆಕಾರದ ಮೂಲವಸ್ತುಗಳನ್ನು (ಎಲಿಮೆಂಟ್ಸ್) ಗಮನಿಸಬಹುದು. ಭಾಷೆಯಲ್ಲಿ ಎಷ್ಟು ಭಿನ್ನ ಅರ್ಥಗಳನ್ನು ಗುರುತಿಸಬೇಕಾಗುವುದೋ ಅಷ್ಟು ಸಂಖ್ಯೆಯ ಉಚ್ಚಾರಣಾರೂಪಗಳೂ ಇವೆಯೆನ್ನಬೇಕಾಗುತ್ತದೆ. ಬೆಕ್ಕು ಎನ್ನುವ ಬದಲು ನಾಯಿ ಎನ್ನುವುದರಿಂದ ಅರ್ಥದಲ್ಲಿ ವ್ಯತ್ಯಾಸ ತೋರಿಬಂದರೆ ಆಗ ಅವೆರಡನ್ನೂ ಬೇರೆ ಬೇರೆ ಬಾಹ್ಯರೂಪವಿರುವ ಸಂಕೇತಗಳೆನ್ನಬೇಕು. ಭಾಷಾ ವಿಶ್ಲೇಷಣದ ಈ ವ್ಯಾಪಾರವನ್ನು ಅದೇಶ ಅಥವಾ ಒಂದರ ಸ್ಥಾನದಲ್ಲಿ ಇನ್ನೊಂದು ಬರುವಿಕೆ (ಕಾಮ್ಯುಟೇಷನ್) ಎನ್ನುತ್ತಾರೆ.

	ಯಾವುದೇ ಒಂದು ಸಂಕೇತದ ಉಚ್ಚಾರಣಾರೂಪವನ್ನು ತೆಗೆದುಕೊಂಡು ಅದರ ರಚನೆಯಲ್ಲಿರುವ ಪ್ರತಿಯೊಂದು ಧ್ವನಿಯ ಸ್ಥಾನದಲ್ಲಿ ಆ ಭಾಷೆಯಲ್ಲಿನ ಇತರ ಧ್ವನಿಗಳನ್ನು ಉಪಯೋಗಿಸಿದಾಗ ಭಿನ್ನಾರ್ಥಕ ಸೂಚಕ ಸಂಕೇತಗಳಾಗುವುವೇ ಎಂದು ಪರೀಕ್ಷಿಸಬಹುದು. ಹಾಗೆಯೇ ಯಾವುದೇ ಸಂಕೇತಕ್ಕೆ ಸಂಬಂಧಿಸಿದ ಅರ್ಥವನ್ನು ಇದೇ ಕ್ರಮದಲ್ಲಿ ವಿಭಾಗಿಸಬಹುದು. ವಾಚಾ ಎಂಬ ಸಂಕೇತದ ಅರ್ಥವನ್ನು ತೃತೀಯಾ ವಿಭಕ್ತಿ, ಏಕವಚನ, ಸ್ತ್ರೀಲಿಂಗವೆಂದು ಮೂರು ವಿಭಾಗಗಳಾಗಿ ಒಡೆಯಬಹುದು. ಇಲ್ಲಿ ತೃತೀಯಾ ವಿಭಕ್ತಿಗೆ ಬದಲಾಗಿ ಚತುರ್ಥೀ ರೂಪ ಬಂದರೆ ವಾಚೇ ಎಂದಾಗುತ್ತದೆ. ಏಕವಚನದ ಬದಲು ಬಹುವಚನ ಬಂದರೆ ವಾಗ್‍ಭಿ: ಎಂದಾಗುತ್ತದೆ. ಹೀಗೆ ಭಾಷಾಸಂಕೇತಗಳ  ಬಾಹ್ಯ ರೂಪ ಹಾಗೂ ಆಂತರಿಕ ರೂಪಗಳೆರಡರ ವಿಶ್ಲೇಷಣೆ ಸಾಧ್ಯಾವಾದರೂ ಈ ಎರಡೂ ವಿಶ್ಲೇಷಣೆಗಳ ನಡುವೆ ಪೂರ್ಣ ರೀತಿಯ ಸಾಮ್ಯವಿದೆಯೆನ್ನಲು ಸಾಧ್ಯವಿಲ್ಲ. ಅಂದರೆ, ತೃತೀಯಾ, ಏಕವಚನ, ಮತ್ತು ಸ್ತ್ರೀಲಿಂಗವೆಂದು ಅರ್ಥದಲ್ಲಿ ಮೂರು ವಿಭಾಗ ಮಾಡಿ ತೋರಿಸುವಂತೆ ಈ ಸಂಕೇತದ ಉಚ್ಚಾರಣಾ ರೂಪದಲ್ಲಿ ಮೂರು ವಿಭಾಗ ಮಾಡಿ ಈ ಅರ್ಧ ವಿಭಾಗಕ್ಕೆ ಈ ಉಚ್ಚಾರಣಾ ರೂಪದ ವಿಭಾಗವೆಂದು ತೋರಿಸಲಾಗುವುದಿಲ್ಲ. ಉಚ್ಚಾರಣಾ ರೂಪ ಕೇವಲ ಒಂದೇ ಧ್ವನಿಮಾ ಆ -ಎಂದು. ಇದನ್ನು ಮೂರು ವಿಭಾಗಗಳಾಗಿ ಒಡೆಯಲು ಸಾಧ್ಯವಿಲ್ಲ. ಇದೊಂದು ಧ್ವನಿಮಾವುಳ್ಳ ರೂಪಕ್ಕೆ ಮೇಲಿನ ಮೂರೂ ಅರ್ಥದಲ್ಲಿ ಏಕಕಾಲದಲ್ಲಿ ತೋರಿಬರುತ್ತವೆ. ಹೀಗೆ ಇವೆರಡರ ಮಧ್ಯೆ ಸಾಮ್ಯವಿಲ್ಲದಿರುವುದರಿಂದ ಬಾಹ್ಯರೂಪದ ವಿಶ್ಲೇಷಣೆ ಮತ್ತು ಆಂತರಿಕ  ರೂಪದ ವಿಶ್ಲೇಷಣೆ ಅಂದರೆ ಧ್ವನಿಮಾಗಳ ಮತ್ತು ಅರ್ಥಗಳ ವಿಶ್ಲೇಷಣೆ. ಬೇರೆ ಬೇರೆಯಾಗಿ ನಡೆಯುಬೇಕೆಂದಾಗುತ್ತದೆ. ಹೀಗೆ ಭಾಷಾ ಸಂಕೇತಗಳ ಅರ್ಥವನ್ನು ಅಧ್ಯಯನ ಮಾಡಬೇಕೆಂದೂ ಧ್ವನಿಮಾಗಳಂತೆಯೇ ಅವನ್ನೂ ವಿಶ್ಲೇಷಣೆಗೊಳಪಡಿಸಬೇಕೆಂದೂ ತೋರಿಸಿಕೊಟ್ಟವರಲ್ಲಿ ಎಲ್ಮ್‍ಸ್ಲೆವ್ ಮೊದಲಿಗ. ಅಲ್ಲದೆ ಗ್ಲಾಸೆಮ್ಯಾಟಿಕ್ಸ್ ಸಿದ್ಧಾಂತದಲ್ಲಿ ಇದೊಂದು ವಿಶೇಷ ಅಧ್ಯಯನದ ವಸ್ತು. ಬ್ಲೂಮ್‍ಫೀಲ್ಡ್ ಮೊದಲಾದ ಇತರ ಶಾಖೆಯವರು ಧ್ವನಿಮಾ ವಿಶ್ಲೇಷಣೆಯಂತೆಯೇ ಅರ್ಥವಿಶ್ಲೇಷಣೆ ಸಾಧ್ಯವಿಲ್ಲವೆಂದು ಕೈಬಿಟ್ಟಿದ್ದ ಕಾಲದಲ್ಲಿ ಇದನ್ನು ಸಮರ್ಪಕ ರೀತಿಯಲ್ಲಿ ಸಮರ್ಥಿಸಿದವರೆಂದರೆ ಗ್ಲಾಸೆಮ್ಯಾಟಿಕ್ಸ್ ಸಿದ್ಧಾಂತಿಗಳು.

	ಸಂಕೇತಗಳ ಬಾಹ್ಯರೂಪ ರಚನೆಯಲ್ಲಿನ ಪ್ರತಿ ಧ್ವನಿಮಾದ ಸ್ಥಾನದಲ್ಲಿ ಅನ್ಯ ಧ್ವನಿಮಾದ ಆದೇಶ ಸಾಧ್ಯವಿದೆಯೆಂದೆವು. ಉದಾಹರಣೆಗೆ, ಮರ ಎಂಬ ಸಂಕೇತದಲ್ಲಿ ಮ್ ಸ್ಥಾನದಲ್ಲಿ ನ್ ಉಪಯೋಗವಾದರೆ ನರ ಎಂಬ ಭಿನ್ನಾರ್ಥಕ ಸಂಕೇತವಾಗುತ್ತದೆ. ಇಲ್ಲಿ ಮ್ ಮತ್ತು ನ್ ಧ್ವನಿಮಾಗಳ ನಡುವಣ ಸಂಬಂಧವನ್ನು ರೂಪಾತಾಲಿಕಾತ್ಮಕ ಸಂಬಂಧ (ಪ್ಯಾರಡಿಗ್ಮ್ಯಾಟಿಕ್ ರಿಲೇಷನ್) ಎನ್ನುತ್ತಾರೆ. ಆದರೆ, ಸಂಕೇತದ ವಾಚ್ಯ ರೂಪದಲ್ಲಿನ ಒಂದು ಧ್ವನಿಮಾಕ್ಕೂ ಅದರ ಅನಂತರದ ಧ್ವನಿಮಾಕ್ಕೂ ಮಧ್ಯೆ ಇರುವ ಸಂಬಂಧವನ್ನು ವಾಕ್ಯರಚನಕ್ರಮಾತ್ಮಕ (ಸಿಂಟಗ್ಮ್ಯಾಟಿಕ್ ರಿಲೇಷನ್) ಎನ್ನುತ್ತಾರೆ.  ಉದಾಹರಣೆಗೆ, ಮೇಲಿನ ಸಂಕೇತದಲ್ಲಿ ಮ್ ಮತ್ತು ಅ ಗಳ ನಡುವಣ ಸಂಬಂಧ ಈ ರೀತಿಯದು.

	ಇದು ಗ್ಲಾಸೆಮ್ಯಾಟಿಕ್ಸ್ ಸಿದ್ಧಾಂತದ ಸ್ಥೂಲ ಪರಿಚಯ. ಡೆನ್ಮಾರ್ಕಿನ ಹೊರಗೆ ಈ ಸಿದ್ಧಾಂತದ ಅನುಯಾಯಿಗಳು ಇಲ್ಲವೆಂದೇ ಹೇಳಬಹುದು. ಇದರ ಪ್ರವರ್ತಕರಾದ ಎಲ್ಮ್‍ಸ್ಲೆವ್ ಮತ್ತು ಉಲ್ಡಾವ್ ಇಬ್ಬರೂ ಕಣ್ಮರೆಯಾದ ಮೇಲಂತೂ ಇದರ ಪ್ರಭಾವ ಬಹಳ ಕಡಿಮೆಯಾಯಿತೆನ್ನಬಹುದು.
(ಎಚ್.ಎಸ್.ಎ.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ